ಮಹಾಮಾರಿ ವೈರಸ್ ಜಗತ್ತು: ಕೋವಿಡ್-೧೯
Additional information
Ebook Available On: | https://play.google.com/store/books/details/____________?id=gC84EAAAQBAJ |
---|---|
Author | ಡಾ. ಎಂ .ವೆಂಕಟಸ್ವಾಮಿ |
Publisher | Techfiz Inc |
ಈ ಕೋವಿಡ್-೧೯ರ ರೀತಿಯ ಸೋಂಕು ರೋಗಗಳು ಇಲ್ಲಿಗೆ ಮುಗಿಯುವುದಿಲ್ಲ. ಮಾನವನ ಇತಿಹಾಸದಲ್ಲಿ ಎಷ್ಟೋ ಸೋಂಕು ರೋಗಗಳು ಕಾಣಿಸಿಕೊಂಡಿವೆ. ಮುಂದೆಯೂ ಕಾಣಿಸಿಕೊಳ್ಳುತ್ತವೆ. ಕೋವಿಡ್-೧೯ ಮೊದಲನೆಯದೂ ಅಲ್ಲ ಕೊನೆಯದೂ ಅಲ್ಲ. ಈ ಸಣ್ಣ ಕೃತಿಯಲ್ಲಿ ಕೇವಲ ಕೋವಿಡ್-೧೯ರ ಬಗ್ಗೆ ಮಾತ್ರ ವಿವರಣೆಗಳಿಲ್ಲ. ಸಾವಿರಾರು, ಲಕ್ಷಾಂತರ ವರ್ಷಗಳ ವೈರಾಣುಗಳು ಮತ್ತು ಬ್ಯಾಕ್ಟೀರಿಯಗಳ ಇತಿಹಾಸದ ಜೊತೆಗೆ ಅವು ಕಾಲಾನಂತರದಲ್ಲಿ ಮನುಷ್ಯ ಮತ್ತು ಪ್ರಾಣಿಗಳ ಮೇಲೆ ಮಾಡಿದ ದಾಳಿ, ಸೋಂಕು ಹರಡಿದ ರೋಗಗಳ ವಿವರಣೆಗಳನ್ನು ಇಲ್ಲಿ ಸಂಗ್ರಹಿಸಿ ಕೊಡಲಾಗಿದೆ.
ಮನುಷ್ಯ ತನ್ನ ಜೀವವಿಕಸನದ ಅಸ್ತಿತ್ವವನ್ನು ಪ್ರಾರಂಭದಿಂದಲೂ ಸಂಪೂರ್ಣವಾಗಿ ವೈರಸ್‌ಗಳ ಜೊತೆಗೆ ಅಂಚಿಕೊಳ್ಳುತ್ತಾ ಬಂದಿದ್ದಾನೆ. ೨೦೦೦ರಲ್ಲಿ ನಡೆಸಿದ ಮನುಷ್ಯ ಜೀನೋಮ್ ಯೋಜನೆಯ ಮೂಲಕ ಮನುಷ್ಯನ ಡಿಎನ್‌ಎ’ನಲ್ಲಿ ವೈರಸ್‌ಗಳ ದೆವ್ವಗಳಿವೆ ಎಂದು ಬಹಿರಂಗವಾಯಿತು. ಇದು ಸಣ್ಣ ವಿಷಯವಲ್ಲ, ಕನಿಷ್ಠ ೮ ಪ್ರತಿಶತದಷ್ಟು ಮಾನವ ಜೀನೋಮ್‌ಗಳು ನಮ್ಮ ಪೂರ್ವಜರ ಪ್ರಾಚೀನ ಡಿಎನ್‌ಎ ರೆಟ್ರೊ ವೈರಸ್‌ಗಳ ಹಲ್ಲಿನ ಗುರುತುಗಳನ್ನು ತೋರಿಸುತ್ತವೆ. ವೈರಸ್‌ಗಳು ಜೀನೋಮ್‌ನಲ್ಲಿ ಲಾಕ್ ಆಗಬಹುದು ಮತ್ತು ಅವು ನಿಜವಾಗಿಯೂ ಅತಿಥೇಯರ ಮೂಲಕ ಉಪಯುಕ್ತವಾದ ಜೀನ್‌ಗಳನ್ನು ಕೊಂಡೊಯ್ಯುತ್ತವೆ. ಈ ವಿಷಯ ವಿಜ್ಞಾನ ಜಗತ್ತಿನಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ.
ಕನಿಷ್ಟ ೬೦ ದಶಲಕ್ಷ ವರ್ಷಗಳ ಹಿಂದೆ ಒಂದು ಸಿನಿಸಿಟೀನ್ ಎಂಬ ಜೀನ್ ಇದ್ದು, ಅದು ಜರಾಯುವಿನ (ಪ್ಲಸೆಂಟ) ವಿಕಾಶಕ್ಕೆ ಉತ್ತೇಜನ ನೀಡಿತು. ಇದಕ್ಕೆ ಮೊದಲು, ಪ್ರಾಣಿಗಳು ತಾಯಿಯ ಸ್ವಂತ ಪ್ರಚೋದಕ ಪ್ರತಿರಕ್ಷಣಾ ವ್ಯವಸ್ಥೆಯಿಂದ ತಮ್ಮ ಸಂತತಿಯನ್ನು ಹೊರಹಾಕಲು ಮೊಟ್ಟೆಯ ಚಿಪ್ಪುಗಳನ್ನು ಬಳಸಿಕೊಂಡವು. ಇಲ್ಲದಿದ್ದರೆ ಭ್ರೂಣವನ್ನು ಬಿಳಿ ರಕ್ತ ಕಣಗಳಿಂದ ಕಸಿದುಕೊಳ್ಳಲಾಗುತ್ತಿತ್ತು. ಸಿನಿಸಿಟೀನ್ ವೈರಸ್ ಜೀನ್‌ಗಳಿಗೆ ಭ್ರೂಣ ಮತ್ತು ತಾಯಿಯ ನಡುವೆ ತಡೆಗೋಡೆ ನಿರ್ಮಿಸಲು ಅನುವು ಮಾಡಿಕೊಟ್ಟವು. ಸರಳವಾಗಿ ಹೇಳಬೇಕೆಂದರೆ, ಮಾನವ ವಿಕಾಸದ ಕೆಲವು ಮೂಲಭೂತ ತತ್ವಗಳಿಗೆ ನಾವು ವೈರಸ್‌ಗಳಿಗೆ ಎಂದೆಂದಿಗೂ ಋಣಿಯಾಗಿದ್ದೇವೆ.
ಈ ಸೋಂಕು ರೋಗಗಳನ್ನು ತಡೆಗಟ್ಟಬೇಕಾದರೆ ಇಮ್ಯೂನಿಟಿ ಬೆಳೆಸುವ ಲಸಿಕೆಗಳಿಗಿಂತ ಹೆಚ್ಚಾಗಿ ಗರ್ಭಿಣಿಯರು ಮತ್ತು ಮಕ್ಕಳ ಮರಣವನ್ನು ತಡೆಗಟ್ಟಲು ಅಪೌಷ್ಟಿಕತೆಯ ವಿರುದ್ಧ ಹೋರಾಡಬೇಕಾಗಿದೆ. ಅಪೌಷ್ಟಿಕತೆ, ಕುಂಠಿತ ಬೆಳವಣಿಗೆ, ರಕ್ತಹೀನತೆ ಮತ್ತು ರೋಗ ತಡೆಗಟ್ಟುವಿಕೆಯ ವಿರುದ್ಧವೂ ಹೋರಾಟ ನಡೆಸಬೇಕಿದೆ. ಇದರಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ, ಮಧ್ಯಾಹ್ನ ಉಪಹಾರ ಯೋಜನೆ, ಪೋಶನ್ ಅಭಿಯಾನ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಭಾಗವಹಿಸುವಿಕೆ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಜೊತೆಗೆ ಸ್ವಚ್‌ಭಾರತ ಅಭಿಯಾನವೂ ಕೂಡ. ಇದರಿಂದ ರೋಗ ಹರಡುವುದನ್ನು ಸಾಕಷ್ಟು ತಡೆಗಟ್ಟಬಹುದು. ಇದರ ಜೊತೆಗೆ ವಾಯುಮಾಲಿನ್ಯ, ಜಲಮಾಲಿನ್ಯ ತಡೆಗಟ್ಟುವುದು, ವೈಜ್ಞಾನಿಕ ರೀತಿಯ ತ್ಯಾಜ್ಯ ವಿಲೆವಾರಿ, ಪ್ಲ್ಯಾಸ್ಟಿಕ್ ನಿಷೇಧ, ಕೈಗಳಿಂದ ಕಸ ಸಂಗ್ರಹಿಸುವುದನ್ನು ತಡೆಯುವುದು ಮತ್ತು ನೈರ್ಮಲ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ.
ಇದುವರೆಗೂ ಜಗತ್ತಿನಾದ್ಯಂತ ಸಂಶೋಧನೆಗಳನ್ನು ಮಾಡಿ ಕೋವಿಡ್-೧೯ರ ವಿರುದ್ಧ ಕಂಡು ಹಿಡಿದಿರುವ ಯಾವುದೇ ಲಸಿಕೆಗಳು ರೋಗವನ್ನು ನಿರ್ಮೂಲನೆ ಮಾಡುವುದು ಒಂದು ಕಡೆಗಿರಲಿ, ರೋಗವನ್ನು ನೇರವಾಗಿ ವಾಸಿ ಮಾಡಲಾರವು. ಇವೆಲ್ಲ ಕೇವಲ ರೋಗವನ್ನು ಕಡೆಗಟ್ಟಲು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಮಾತ್ರ ಬೆಳೆಸುತ್ತವೆ. ಅದೂ ಕೂಡ ಎಷ್ಟು ಗ್ಯಾರಂಟಿ ಎನ್ನುವುದಕ್ಕೆ ಯಾವು ವಿಜ್ಞಾನಿಯ ಹತ್ತಿರವೂ ನಿಖರವಾದ ಉತ್ತರವಿಲ್ಲ. ಆದರೆ ಈ ವೈರಸ್ ಬಹುಮಿಲಿಯ ಕಂಪನಿಗಳಿಗೆ ಲಾಭ ತರುತ್ತದೆ ಎನ್ನುವುದು ಮಾತ್ರ ಗ್ಯಾರಂಟಿ. ಒಟ್ಟಿನಲ್ಲಿ ಈ ಕರೋನ ಮುಂದಿನ ದಿನಗಳಲ್ಲಿ ಇನ್ನೂ ಏನೆಲ್ಲ ಅವಾಂತರಗಳನ್ನು ಸೃಷ್ಟಿಸುತ್ತದೊ ಕಾದು ನೋಡಬೇಕಿದೆ. ಪ್ರತಿ ಪಕ್ಷಿ-ಪ್ರಾಣಿ, ಗಾಳಿ-ನೀರು ಮನುಷ್ಯ, ಸಸ್ಯಗಳಲ್ಲೂ ಬಿಲಿಯನ್‌ಗಟ್ಟಲೇ ವೈರಸ್‌ಗಳು ತುಂಬಿಕೊಂಡಿವೆ. ವೈರಸ್‌ಗಳು ಭೂಮಿಯ ಮೇಲಿನ ಎಲ್ಲಾ ರೀತಿಯ ವಸ್ತುಗಳನ್ನು ತಿಂದು ಮುಗಿಸುತ್ತವೆ. ಸತ್ತ ಪಕ್ಷಿ-ಪ್ರಾಣಿ, ಮನುಷ್ಯರನ್ನು ತಿಂದು ಮುಗಿಸುವುದು ಕೂಡ ವೈರಸ್‌ಗಳೆ.
ಈ ಕೃತಿಯಲ್ಲಿರುವ ವೈರಸ್ ಬಗೆಗಿನ ವಿವರಣೆಗಳು ಇಲ್ಲಿಗೆ ಮುಗಿಯುವುದಿಲ್ಲ. ಹಾಗೆಯೇ ವಿಜ್ಞಾನ-ತಂತ್ರಜ್ಞಾನದ ಆವಿಷ್ಕಾರಗಳು ಮತ್ತು ವೈರಾಣುಗಳ ರೂಪಾಂತರವು ಕೂಡ. ಇದು ಈ ಭೂಮಿ, ಭೂಮಿಯ ಮೇಲಿರುವ ಜೀವಜಗತ್ತು ಇರುವವರೆಗೂ ವೈರಾಣು ಜಗತ್ತು ನಮ್ಮ ಸುತ್ತಲೂ ತುಂಬಿಕೊಂಡೇ ಇರುತ್ತದೆ. ವೈರಾಣುಗಳ ಬಗೆಗಿನ ನಮ್ಮ ಜ್ಞಾನ ಬ್ರಹ್ಮಾಂಡದಲ್ಲಿನ ಡಾರ್ಕ್ ಮ್ಯಾಟರ್ ಬಗ್ಗೆ ತಿಳಿದಿರುವ ಅಲ್ಪಸ್ವಲ್ಪ ಜ್ಞಾನಕ್ಕಿಂತ ಹೆಚ್ಚಿನದೇನಲ್ಲ.
ಡಾ. ಎಂ .ವೆಂಕಟಸ್ವಾಮಿ
ಭೂವಿಜ್ಞಾನಿ ಮತ್ತು ಲೇಖಕ
This book has been prepared & published by Techfiz Inc, Bengaluru under Ink & Weave Initiative.
Reviews
There are no reviews yet.