ಹೂಯೆನ್ ತ್ಸಾಂಗನ ಮಹಾಪಯಣ
Additional information
Ebook Available On: | https://play.google.com/store/books/details/Ravi_Hanj________?id=pCz6DwAAQBAJ |
---|---|
Author | Ravi Hanj |
Publisher | Ravi Hanj |
ಪ್ರಕಾಶಕರ ಮಾತು
ಕನ್ನಡವನ್ನು ಪ್ರಪಂಚದ ಪ್ರಮುಖ ಭಾಷೆಗಳಲ್ಲಿ ಒಂದಾಗಿ ಕಂಡು, ಅದಕ್ಕೆ ಅಧಿಕಾರಯುತವಾಗಿ ಸಲ್ಲಬೇಕಿರುವ ಜಾಗತಿಕ ಮನ್ನಣೆಯನ್ನು ಗಳಿಸುವುದು ಸಮಾಜಮುಖಿ ಪ್ರಕಾಶನದ ಪ್ರಮುಖ ಉದ್ದೇಶ. ಸೃಜನಶೀಲ ಪ್ರಕಾರದಲ್ಲಿ ಉತ್ತಮಿಕೆಯನ್ನು ಕಂಡಿರುವ ಕನ್ನಡ ಭಾಷೆಯಲ್ಲಿ ಗಂಭೀರ ವೈಚಾರಿಕತೆಯನ್ನು ಹೊಂದಿರುವ ಹಾಗೂ ಸತ್ಯನಿಷ್ಠ ಸಂಶೋಧನೆಯನ್ನು ಆಧರಿಸಿರುವ ಸೃಜನೇತರ ಬರವಣಿಗೆಗಳನ್ನೂ ಬೆಳೆಸಬೇಕು ಎನ್ನುವುದು ಸಮಾಜಮುಖಿಯ ಆಶಯವಾಗಿದೆ. ಇದಕ್ಕಾಗಿ ಸಮಾಜಮುಖಿ ಮಾಸಪತ್ರಿಕೆಯ ಜೊತೆಗೆ ಉನ್ನತ ಗುಣಮಟ್ಟದ ಪುಸ್ತಕಗಳನ್ನು ನೀಡುವುದು ನಮ್ಮ ಗುರಿ.
ರವಿ ಹಂಜ್‍ರವರ ’ಮಹಾಪಯಣ’ ಸಮಾಜಮುಖಿ ಪ್ರಕಾಶನದ ಚೊಚ್ಚಲ ಪ್ರಕಟಣೆ. ಚೀನಾ ದೇಶದ ಮಯಾಯಾತ್ರಿಕ ಹೂಯೆನ್ ತ್ಸಾಂಗನ ಭಾರತ ಪ್ರವಾಸವನ್ನು ಲೇಖಕ ರವಿ ಹಂಜ್ ಇಲ್ಲಿ ಪುನಾರಚಿಸುತ್ತಿದ್ದಾರೆ. ಮೂಲ ಐತಿಹಾಸಿಕ ಆಕರಗಳನ್ನು ಮತ್ತು ಹುಯೆನ್ ತ್ಸಾಂಗನ ಬಗ್ಗೆ ರಚಿತವಾಗಿರುವ ಸಂಶೋಧನ ಕೃತಿಗಳನ್ನು ಅಧ್ಯಯನ ಮಾಡಿರುವ ಲೇಖಕರು ಭಾರತದ ಮಧ್ಯಕಾಲೀನ ಇತಿಹಾಸದ ಅತ್ಯಂತ ಕುತೂಹಲಕಾರಿ ಪ್ರಸಂಗವೊಂದನ್ನು ಸರಳವಾಗಿ, ಸಾಂದರ್ಭಿಕ ವಿವರಗಳೊಡನೆ ಕಟ್ಟಿಕೊಟ್ಟಿದ್ದಾರೆ. ಅಮೆರಿಕ-ಯೂರೋಪುಗಳಲ್ಲಿ ಉನ್ನತ ಶಿಕ್ಷಣ ಪಡೆದು, ಔದ್ಯೋಗಿಕ ಮತ್ತು ವೃತ್ತಿಪರ ಯಶಸ್ಸನ್ನು ಕಂಡಿರುವ ಸಾಧಕ ಕನ್ನಡಿಗರಿಂದ ಜಾಗತಿಕ ಜ್ಞಾನಧಾರೆಯನ್ನು ಕನ್ನಡಕ್ಕೆ ತಂದು, ಅದರ ಭಾಷಾಸಾಹಿತ್ಯವನ್ನು ಶ್ರೀಮಂತಗೊಳಿಸುವ ಆದರ್ಶ ಕೃತಿಯಂತೆ ಈ ಪುಸ್ತಕವು ಹೊರಬಂದಿದೆ.
--
“This book was produced with ePustaka - Ink and Weave initiative by Techfiz Inc. (https://techfiz.com) Reach us via info@techfiz.com.”
ಹುಯೆನ್ ತ್ಸಾಂಗನದು ಅಪರೂಪದ ಬದುಕು. ಏಳನೆಯ ಶತಮಾನದ ಈ ಯಾತ್ರಿಕ ಹುಟ್ಟಿದ್ದು ಕನಫ್ಯೂಷಿಯನ್ ಪರಂಪರೆಯ ಕುಟುಂಬದಲ್ಲಿ. ಆದರೆ ತನ್ನ ಹದಿಹರೆಯದಲ್ಲಿಯೇ ಅವನು ಬೌದ್ಧ ಭಿಕ್ಷುವಾದನು. ಚೀನಾದಲ್ಲಿದ್ದ ಬೌದ್ಧ ಸಂಪ್ರದಾಯಗಳನ್ನು ಅಭ್ಯಸಿಸಿದ ನಂತರ, ಅವುಗಳ ಬೌದ್ಧಿಕತೆ ಮತ್ತು ಚೀನಾದಲ್ಲಿ ದೊರೆಯುತ್ತಿದ್ದ ಬೌದ್ಧಪಠ್ಯಗಳ ಗುಣಮಟ್ಟದ ಬಗ್ಗೆ ಹುಯೆನ್ ತ್ಸಾಂಗನಲ್ಲಿ ಅಪಾರವಾದ ಅತೃಪ್ತಿ ಮೂಡಿತು. ಆ ಅತೃಪ್ತಿಯೇ ಅವನನ್ನು ಭಾರತಕ್ಕೆ ಕರೆತಂದಿತು. ಸುಮಾರು ೬೩೦ರಿಂದ ೬೪೪ರವರೆಗೆ ಭಾರತದ ಎಲ್ಲೆಡೆ ಪ್ರವಾಸ ಮಾಡಿದ ಹುಯೆನ್ ತ್ಸಾಂಗನು ಏಳನೆಯ ಶತಮಾನದ ಅತ್ಯುನ್ನತ ಬೌದ್ಧಚಿಂತಕರಿಂದ ಕಲಿತನು, ಹೋದ ಕಡೆಯಲ್ಲೆಲ್ಲಾ ಹಸ್ತಪ್ರತಿಗಳನ್ನು ಸಂಗ್ರಹಿಸಿದನು. ಹರ್ಷವರ್ಧನ, ಭಾಸ್ಕರವರ್ಮ ಮೊದಲಾದ ರಾಜರೊಡನೆ ಒಡನಾಡಿದನು. ಹರ್ಷನೇ ನಡೆಸಿದ ಧಾರ್ಮಿಕ ಸಮ್ಮೇಳನಗಳಲ್ಲಿ ಪಾಲ್ಗೊಂಡನು. ೬೪೫ರಲ್ಲಿ ಚೀನಾಕ್ಕೆ ಹಿಂದಿರುಗಿದ ನಂತರ ೬೬೪ರಲ್ಲಿ ೬೨ನೆಯ ವಯಸ್ಸಿನಲ್ಲಿ ನಿಧನನಾಗುವ ತನಕ ಹುಯೆನ್ ತ್ಸಾಂಗನು ಅನುವಾದ ಮತ್ತು ಬರವಣಿಗೆಗಳಲ್ಲಿ ತೊಡಗಿಸಿಕೊಂಡನು.
ಹುಯೆನ್ ತ್ಸಾಂಗನ ವಿಶಿಷ್ಟ ವ್ಯಕ್ತಿತ್ವದ ಎರಡು ಆಯಾಮಗಳು ಉಲ್ಲೇಖನೀಯವಾದವು. ಒಂದೆಡೆ ಅವನಲ್ಲಿ ಉದ್ಧಾಮ ಪಂಡಿತನೊಬ್ಬನಲ್ಲಿ ಕಂಡುಬರುವ ಅಪಾರ ಬೌದ್ಧಿಕ ಹಸಿವಿದೆ. ಮತ್ತೊಂದೆಡೆ ಆ ಹಸಿವನ್ನು ಇಂಗಿಸಲು ಪ್ರಯತ್ನಿಸುವಾಗ ಚೆಂಗೀಸ್ ಖಾನನಂತಹ ದಂಡನಾಯಕನಲ್ಲಿ ಕಾಣಸಿಗುವ ಛಲ, ದೃಢ ನಿಶ್ಚಯ ಮತ್ತು ದೈಹಿಕ ಸಾಮರ್ಥ್ಯಗಳಿವೆ. ಇಂತಹ ವಿಶಿಷ್ಟ ಪಯಣಿಗನ ಭಾರತಯಾತ್ರೆಯನ್ನು ’ಮಹಾಪಯಣ’ವು ಇಂದಿನ ಓದುಗರಿಗೆ ತಲುಪಿಸುತ್ತಿದೆ. ಹರ್ಷವರ್ಧನನ ಕಾಲದ ಭಾರತವು ಬದಲಾವಣೆಗಳನ್ನು ಕಾಣಲಾರಂಭಿಸಿತ್ತು. ಅದರ ವೈಚಾರಿಕ ಮತ್ತು ಧಾರ್ಮಿಕ ಬಹುತ್ವಗಳು ಮುಂದುವರೆಯುತ್ತಿದ್ದರೂ ಸಹ, ಆಗಿನ್ನೂ ಪ್ರಕಾಶಿಸುತ್ತಿದ್ದ ಬೌದ್ಧಧರ್ಮವು ಒಂದೆರಡು ಶತಮಾನಗಳ ಒಳಗೆ ಅವನತಿ ಹೊಂದುತ್ತಿತ್ತು. ಪಶ್ಚಿಮ ಮತ್ತು ದಕ್ಷಿಣ ಭಾರತಗಳಲ್ಲಿ ಜೈನಧರ್ಮವೂ ತನ್ನ ಪ್ರಾಬಲ್ಯವನ್ನು ಸ್ಥಾಪಿಸಿಕೊಳ್ಳಲಾರಂಭಿಸಿತ್ತು. ಆದರೆ ಅದರೆ ಪ್ರಗತಿಯೂ ಕುಂಠಿತವಾಗುವ ದಿನಗಳು ದೂರವಿರಲಿಲ್ಲ.
ಸ್ಥಳೀಯ ಭಾಷೆಗಳು ಮತ್ತು ಚಾಲುಕ್ಯ-ಪಲ್ಲವರಂತಹ ಹೊಸ ರಾಜಕೀಯ ಶಕ್ತಿಗಳು ತಮ್ಮ ಪ್ರಾದೇಶಿಕ ಮಿತಿಗಳನ್ನು ಮೀರಿ ಬೆಳೆಯಲಾರಂಭಿಸಿದ್ದವು. ಆ ಮೂಲಕ ಭಾರತದ ನಾಗರಿಕತೆಗೆ ಹೊಸ ಆಯಾಮಗಳು ಮತ್ತು ನವಚೈತನ್ಯ ದೊರಕುತ್ತಿತ್ತು. ಇಂತಹ ಸಂಕ್ರಮಣದ ಕಾಲದಲ್ಲಿ ಹುಯೆನ್ ತ್ಸಾಂಗನು ಭಾರತಕ್ಕೆ ಬಂದನು. ಭಾರತದ ಉದ್ದಗಲಕ್ಕೂ ಬುದ್ಧನನ್ನು ಅರಸುತ್ತ ಮುಂದೆ ಸಾಗುವ ಅವನ ಪಯಣದ ಈ ಮಹಾಕಥೆಯು ಆಧುನಿಕ ಮಹಾಪುರಾಣದಂತೆ ಕಂಡುಬರುತ್ತದೆ.
- ಪೃಥ್ವಿದತ್ತ ಚಂದ್ರಶೋಭಿ
Reviews
There are no reviews yet.